ಮೋಡಿ ಹಾಕುವುದು -
ಸವಾಲು ಒಡ್ಡುವ ಮತ್ತು ಅದನ್ನು ಸ್ವೀಕರಿಸುವ ಒಂದು ಬಗೆಯ ಮಾಂತ್ರಿಕ ಸ್ಪರ್ಧೆ; ಆಟ. ಮೋಡಿ ಹಾಕು ಎಂಬ ಶಬ್ದಕ್ಕೆ ಸಾಮಾನ್ಯವಾಗಿ ಮಂಕು ಕವಿಸು, ದಿಗ್ಭ್ರಮೆಗೊಳಿಸು, ಅತೀಂದ್ರಿಯ ಅನುಭವವನ್ನು ಉಂಟುಮಾಡು ಎಂಬ ಅರ್ಥಗಳಿವೆ. ಮೋಡಿ ಹಾಕುವುದನ್ನು, ಮೋಡಿ ಎತ್ತುವುದನ್ನು ವೃತ್ತಿಯಾಗಿಸಿಕೊಂಡಿರುವವರನ್ನು ಮೋಡಿಕಾರರೆಂದು ಕರೆಯಲಾಗುತ್ತದೆ.

	ಮೋಡಿಹಾಕಲು ಎರಡು ಗುಂಪುಗಳಿರಬೇಕು.  ಒಂದು ಗುಂಪಿನವರು ಮಣ್ಣಿನ ನೆಲದ ಮೇಲೆ ಮಂಡಲಗಳನ್ನು ಎಳೆದು ಮೋಡಿಹಾಕಿದರೆ ಇನ್ನೊಂದು ಗುಂಪಿನವರು ಅದನ್ನು ಎತ್ತುತ್ತಾರೆ.  ಮೋಡಿ ಹಾಕುವುದಕ್ಕೆ ಒಂದು ನಿಶ್ಚಿತ ಸ್ಥಳವನ್ನು ಗೊತ್ತು ಮಾಡಲಾಗುತ್ತದೆ.  ಮೋಡಿ ಹಾಕುವ ವಿಷಯವನ್ನು ತಮ್ಮಟೆ ಬಡಿದು ಊರಿಗೆಲ್ಲ ಸಾರುತ್ತಾರೆ.  ಮೋಡಿ ಹಾಕುವ, ಮೋಡಿಯನ್ನು ಎತ್ತುವ ಪ್ರತಿಸ್ಪರ್ಧಿಗಳು ಆ ಊರಿನಲ್ಲಿ ಯಾರಾದರು ಇದ್ದರೆ ಈ ವಿಷಯ ಅವರಿಗೆ ಸವಾಲು ಹಾಕಿದಂತೆ ಇರುತ್ತದೆ.  ಮೋಡಿಹಾಕುವುದಕ್ಕೆ ಇಂಥದೇ ಹೊತ್ತು ಎಂಬುದು ಇಲ್ಲದಿದ್ದರೂ ಮಧ್ಯಾಹ್ನದ ಉರಿಬಿಸಿಲಿನಲ್ಲಿ ಹಾಕುವುದು ಸಾಮಾನ್ಯ.  ಮೊದಲಿಗೆ ಏಳು ಮಂಡಲಗಳನ್ನು (ಚಚ್ಚೌಕಾಕಾರದ ಮನೆಗಳು) ಮಣ್ಣಿನ ನೆಲದ ಮೇಲೆ ಬೂದಿಯ ಪಟ್ಟೆಯಿಂದ ಬರೆಯುತ್ತಾರೆ.  ಏಳನೆಯ ಮಂಡಲದ ತಲೆಭಾಗದಲ್ಲಿ ಮೋಡಿ ಒಡ್ಡಿರುವವನ ದೇವತೆ ಇತ್ಯಾದಿಗಳಿರುತ್ತವೆ.  ತೆಂಗಿನಕಾಯಿ, ಸೂಜಿಗಳನ್ನು ಚುಚ್ಚಿದ ನಿಂಬೆಹಣ್ಣು, ಕೋಳಿಮೊಟ್ಟೆ, ಪಾವಲಿ (ನಾಲ್ಕಾಣೆ ನಾಣ್ಯ), ಬೇವಿನಸೊಪ್ಪು, ಅರಿಶಿಣದ ನೀರುಳ್ಳ ಮೊಗೆ ಇವನ್ನು ಪಂಥವಾಗಿ ಇಟ್ಟಿರುತ್ತಾರೆ.  ಈ ವಸ್ತುಗಳಲ್ಲಿ ಮೋಡಿ ಹಾಕಿರುವ ಪಕ್ಷದವರ ಎಲ್ಲಾ ಬಲಾಬಲಾಗಳೂ ಕೇಂದ್ರೀಕೃತವಾಗಿರುತ್ತವೆ.  ಮೋಡಿ ಎತ್ತುವವನು ತನ್ನ ಮನೆ ದೇವರಿಗೆ ನಮಸ್ಕರಿಸಿ ರಂಗಕ್ಕೆ ಇಳಿಯುತ್ತಾನೆ.  ಆಗ ಡೋಲಿನ ಶಬ್ದ ಕಿವಿ ಚಿಟ್ ಎನ್ನಿಸುವಂತಿರುತ್ತದೆ.  ಮೋಡಿ ಎತ್ತುವವನು ಮೊದಲನೆಯ ಮಂಡಲದಿಂದ ಪ್ರಾರಂಭಿಸುತ್ತಾನೆ.  ಮಂತ್ರತಂತ್ರಗಳನ್ನೆಲ್ಲ ಲಂಘಿಸಿ ಒಂದೊಂದಾಗಿ ಹೋರಾಡಿ ಮಂಡಲಗಳಲ್ಲು ಇಟ್ಟಿರುವ ವಸ್ತುಗಳನ್ನು ಎತ್ತುತ್ತಾನೆ.  ಅನೇಕ ಸಾರಿ ವಸ್ತುಗಳನ್ನು ಎತ್ತಲಾರದೆ ರಕ್ತ ಕಕ್ಕಿಕೊಳ್ಳುವುದು, ಮೈ ಉರಿಯೆಂದು ಕೆರೆದುಕೊಳ್ಳುವುದು, ಜೊಲ್ಲುಸೋರಿ ಮೂರ್ಛೆ ಹೋದಂತೆ ಬೀಳುವುದೂ ಉಂಟು.  ಆ ಸಮಯದಲ್ಲಿ ಮೋಡಿ ಎತ್ತುವವನ ಪಕ್ಷದ ಇನ್ನೊಬ್ಬ ವ್ಯಕ್ತಿ ಕಪ್ಪು ಇತ್ಯಾದಿ ಮಾಂತ್ರಿಕ ವಸ್ತುಗಳಿಂದ ಸೋಲುತ್ತಿರುವವನಿಗೆ ಶಕ್ತಿ ತುಂಬುತ್ತಾನೆ ಅಥವಾ ತಾನೇ ಮೋಡಿ ಎತ್ತಲು ಮುನ್ನುಗ್ಗುತ್ತಾನೆ.  ಹೆಂಗಸರು ಮತ್ತು ಹದಿನಾಲ್ಕು ವರ್ಷದ ಹುಡುಗರೂ ಮೋಡಿಯನ್ನು ಎತ್ತುವುದುಂಟು.  ಮೋಡಿ ಎತ್ತುವಾಗ ಶಕ್ತಿಯ ಆವಾಹನೆಗೆ ಸಂಬಂಧಿಸಿದಂತೆ ಅನೇಕ ಮಾಂತ್ರಿಕ ಹಾಡುಗಳನ್ನು ಹಾಡುತ್ತಾರೆ.  ಎಲ್ಲ ಮಂಡಲಗಳನ್ನು ದಾಟುವತನಕ ಗಂಭೀರವಾದ, ನಗೆ ಹುಟ್ಟಿಸುವ ಮತ್ತು ಆಶ್ಚರ್ಯಚಕಿತವಾದ ಅನೇಕ ಸನ್ನಿವೇಶಗಳು ಎದುರಾಗುತ್ತವೆ.  ಮೊಟ್ಟೆ ಹಾರಿಕೊಂಡು ಹೋಗುವುದು, ಬೇವಿನಸೊಪ್ಪು ಚೇಳಾಗುವುದು, ಮೋಡಿ ಹಾಕುವವರು ಮತ್ತು ಎತ್ತುವವರು ಓಡಿಹೋಗಿ ಮರಕಚ್ಚಿಕೊಳ್ಳುವುದು, ನೀರಿಗೆ ಬೀಳುವುದು, ಮಣ್ಣುಮುಕ್ಕುವುದು ಮೊದಲಾದ ವಿಚಿತ್ರ ಸಂಗತಿಗಳು ನಡೆಯುತ್ತವೆ.  ಇದರ ನಡುವೆ ಮೋಡಿಹಾಕುವವರಲ್ಲಿ ಹಾಗೂ ಮೋಡಿ ಎತ್ತುವವರಲ್ಲಿ ಕುತೂಹಲಭರಿತವಾದ ಒಂದು ರೀತಿಯ ನಾಟಕೀಯ ಸಂಭಾಷಣೆ ಕೂಡ ನಡೆಯುತ್ತಿರುತ್ತವೆ.

	ಒಂದೊಂದು ಸಾರಿ ಮೋಡಿ ಎತ್ತುವವರು ಎಲ್ಲವನ್ನೂ ಎತ್ತಿ ಗೆದ್ದು ಸವಾಲು ಹಾಕುವುದುಂಟು.  ಇಲ್ಲವೆ, ಒಂದೆರಡು ಮಂಡಲಗಳನ್ನು ಮಾತ್ರ ದಾಟಿ ಮುಂದೆ ಮುನ್ನಗ್ಗಲಾರದೆ ತನ್ನ ಅಶಕ್ತತೆಯನ್ನು ತೋರಿಸಿಕೊಳ್ಳಬಹುದು.  ಆಗ ಬಾಕಿ ಉಳಿದ ಮಂಡಲಗಳನ್ನು ಮೋಡಿ ವಿದ್ಯೆ ಬಲ್ಲ ಬಲಿಷ್ಠರು ಯಾರಾದರೂ ಎತ್ತಬಹುದು.  		
ಮೋಡಿಗಳಲ್ಲಿ ಪ್ರಮುಖವಾಗಿ ರಣಮೋಡಿ, ರಾಜಮೋಡಿ ಎಂಬ ಎರಡು ವಿಧಗಳಿವೆ.  ರಣಮೋಡಿ ಭೀಕರವಾದುದು; ವೈಷಮ್ಯ ಹಾಗೂ ಜಿದ್ದಿನಿಂದ ಪ್ರೇರಿತವಾದುದು; ಕಠಿಣತರವಾದುದು.  ರಣಮೋಡಿ ಸರಿಯಗಿ ಕಟ್ಟಿತೆಂದರೆ ಎರಡೂ ಕಡೆಯವರು ತಮ್ಮ ಪ್ರಾಣಗಳನ್ನೇ ಸವಾಲಾಗಿ ಒಡ್ಡಿಹೋರಾಡುವುದು ಉಂಟು.  ಇಲ್ಲಿ ಸೋಲು ಗೆಲುವಿನ ಪ್ರಶ್ನೆಯೇ ಬಲುಮುಖ್ಯವಾಗಿರುತ್ತದೆ.  ಒಂದು ಗುಂಪಿನವರು ಇನ್ನೊಂದು ಗುಂಪಿನವರಿಂದ ಸೋತರೆಂದರೆ ಅವರಿಗೆ ಯಾವಾಗಲೂ ಅಡಿಯಾಳಾಗಿ ಇರಬೇಕಾಗುತ್ತದೆ.  ಅಥವಾ ಮತ್ತೊಮ್ಮೆ ರಣಮೋಡಿ ಹಾಕಿ ಗೆದ್ದುಕೊಳ್ಲಬೇಕಾಗುತ್ತದೆ.  ಸಾಮಾನ್ಯವಾಗಿ ಮೋಡಿಹಾಕುವುದು ಮತ್ತು ಎತ್ತುವುದು ಕೆಲವು ಗಂಟೆಗಳಲ್ಲೇ ಮುಗಿದರೆ, ರಣಮೋಡಿ ನಾಲ್ಕೈದು ದಿವಸಗಳ ತನಕವೂ ನಡೆಯಬಹುದು.  ರಣಮೋಡಿಯಲ್ಲಿ ಕತ್ತು ಕತ್ತರಿಸಿ ಪುನಃ ಜೋಡಿಸುವುದು, ಭೂಮಿಯಲ್ಲಿ ಮನುಷ್ಯನನ್ನು ಜೀವಂತವಾಗಿ ಹೂಳುವುದು, ದುರ್ವಾಸನೆಯಿಂದ ಕೂಡಿದ ಅಮೇಧ್ಯವನ್ನು ಭಕ್ಷಿಸುವುದು ಮೊದಲಾದ ಭೀಭತ್ಸ ಚಟುವಟಿಕೆಗಳು ನಡೆಯುತ್ತವೆ.  ಮೋಡಿಹಾಕುವವನಿಗೆ ಕಣ್ಣುಕಟ್ಟು ವಿದ್ಯೆ, ಹಸಿರುಸೊಪ್ಪಿನವಿದ್ಯೆ, ಭರಣಿ ಕಪ್ಪಿನ ವಿದ್ಯೆ ಮೊದಲಾದುವುಗಳ ತಿಳಿವಳಿಕೆಯೂ ಇರುತ್ತದೆ.  ಜೊತೆಗೆ ಮೋಡಿಹಾಕುವಾಗ ಮೋಡಿಕರ ಮಾಂತ್ರಿಕ ವಸ್ತುಗಳಾದ ಬಿಳಿ ಎಕ್ಕದ ಬೇರಿನ ದಂಟಿನಿಂದ ಮಾಡಿದ ಬೊಂಬೆ, ಮನುಷ್ಯನ ತಲೆ ಬುರುಡೆ ಚಿಪ್ಪು, ಸತ್ತ ಬಾಣಂತಿಯ ಕೈಕಾಲುಮೂಳೆಗಳು, ಪುಂಗಿ, ಚಾವಟಿ, ಕ್ರೂರ ದೇವತೆಗಳ ಮುಖವಾಡಗಳು, ಬೇವಿನಸೊಪ್ಪು, ಕಪ್ಪಿನ ಭರಣಿ ಮೊದಲಾದವನ್ನು ಕೂಡ ಬಳಸುತ್ತಾನೆ.

	ಮೋಡಿಹಾಕುವ ಅನೇಕ ತಂತ್ರವಿಧಾನಗಳು ದೊಂಬರಾಟದಲ್ಲಿ ಉಪಯೋಗವಾದರೂ ಅದಕ್ಕಿಂತ ಇದು ತೀರ ಭಿನ್ನವಾದುದು.  ದೊಂಬರಾಟ ಹೊಟ್ಟೆಪಾಡಿಗಾಗಿ ದೊಂಬರಿಂದ ಪ್ರದರ್ಶಿತವಾಗುವ, ಮನರಂಜನೆಯೇ ಪ್ರಮುಖ ಉದ್ದೇಶವಾಗಿರುವ ಆಟ.  ಮೋಡಿ ಹಾಕುವುದರಲ್ಲಿ ಕೂಡ ಮನರಂಜನೆ ಪ್ರಧಾನವಾದರೂ ಒಪ್ಪಂದಗಳ ಮೇಲೆ ಇದು ಎರಡು ಬಣಗಳಿಂದ ನಡೆಯುತ್ತದೆ.  ಮೋಡಿ ಹಾಕುವುದನ್ನೇ ಪ್ರಧಾನ ಕಸಬಾಗುಳ್ಳ ಮೋಡಿಕಾರರು ಇಂದಿಗೂ ಇದ್ದಾರೆ.  ಈ ವಿದ್ಯೆಯಲ್ಲಿ ಪರಿಣಿತಿ ಪಡೆದವರಲ್ಲಿ ಗೊಲ್ಲರ ಹೆಸರು ಪ್ರಮುಖವಾದುದು.  ಅದರಲ್ಲಿಯೂ ಕಂಚಿ ಮತ್ತು ಪೆದ್ದಟಿ ಗೊಲ್ಲರಲ್ಲಿ ವಿದ್ಯೆ ವಿಶೇಷವಾಗಿ ಕಂಡುಬರುತ್ತದೆ.  ಹರಿಜನರಲ್ಲಿಯೂ ಸ್ವಲ್ಪಮಟ್ಟಿಗೆ ಇದೆ.  ಹಾವಾಡಿಗರೂ ಇದೇ ಸಾಲಿನಲ್ಲಿ ಬರುವ ಮತ್ತೊಂದು ವರ್ಗ.  ಇವರು ಕಾಡು ಗೊಲ್ಲರಷ್ಟು ಪರಿಣತರಲ್ಲದಿದ್ದರೂ ತಮ್ಮದೇ ಆದ ರೀತಿಯಲ್ಲಿ ಜನರನ್ನು ರಂಜಿಸುವ, ಬೆರಗುಗೊಳಿಸುವ ಮೋಡಿತಂತ್ರವನ್ನು ಬಲ್ಲವರು.  ಗಾಡಿಗರು ಎಂಬ ಇನ್ನೊಂದು ಬಗೆಯ ಜನ ಕೊಳ್ಳೇಗಾಲ ತಾಲ್ಲೂಕಿನ ದಕ್ಷಿಣದ ಕಡೆ ಕಾಣಸಿಗುತ್ತಾರೆ.  ಕೊಳ್ಳೇಗಾಲ ತಾಲ್ಲೂಕಿನ ತುದಿಯಲ್ಲಿ ತಮಿಳುನಾಡಿನ ಅಂಚಿನಲ್ಲಿ ಕಾಡಿನೊಳಗೆ ಅಲ್ಲಲ್ಲಿ ಗುಡಿಸಲುಗಳನ್ನು ಕಟ್ಟಿಕೊಂಡು ವಾಸಿಸುವ ಮುಳ್ಳು ಕುರುಬರು ರಣಮೋಡಿ ಹಾಕುವುದರಲ್ಲಿ, ಐಂದ್ರಜಾಲಿಕ ವಿದ್ಯೆಯಲ್ಲಿ ಪರಿಣತರು ಎಂಬ ಪ್ರತೀತಿಯಿದೆ. 								                    (ಡಿ.ಡಿ.ಜಿ.)

	ಮೋಡಿವಿದ್ಯೆ ತುಂಬ ಪ್ರಾಚೀನವಾದದ್ದು.  ಮಹಾಭಾರತದಲ್ಲಿ ಗಾರುಡಿಗರ ಉಲ್ಲೇಖವಿದೆ.  ಜನಪದ ಕಾವ್ಯಗಳನ್ನು ನೋಡುವಾಗ ಮೋಡಿಗೆ ಸಂಬಂಧಿಸಿದ ಅನೇಕ ಸಂದರ್ಭಗಳು ಕಾಣಬರುತ್ತವೆ.  ಪ್ರಸಿದ್ಧ ಜನಪದ ಕಾವ್ಯಗಳಾದ ಮಂಟೇಸ್ವಾಮಿ ಕಾವ್ಯ, ಮಲೆಯ ಮಾದೇಶ್ವರ ಕಾವ್ಯಗಳಲ್ಲಿ ಅನೇಕ ನಿದರ್ಶನಗಳಿವೆ.  ಮಂಟೇಸ್ವಾಮಿ ಕಾವ್ಯದ ಆರಂಭದಲ್ಲಿಯೇ ಗಾರುಡಿಗರ ಹುಡುಗರು ಹಾಕಿದ ಮೋಡಿಯನ್ನು ರಾಚಪ್ಪಾಜಿ ಗೆದ್ದು ಆ ಬಾಲಕರಿಗೆ ಹಾಗೂ ಅವರ ಹಿರಿಯರಿಗೆ ಬುದ್ಧಿ ಕಲಿಸುವ ಪ್ರಸಂಗ ವಿಶಿಷ್ಟವಾಗಿದೆ. ಮಕ್ಕಳ ಮಾತನ್ನು ಕಟ್ಟಿಕೊಂಡು ಬಂದ ಆ ಹಿರಿಯರೆಲ್ಲ ಒಟ್ಟಾಗಿ ರಾಚಪ್ಪಾಜಿಯನ್ನು ಮೋಡಿ ವಿದ್ಯೆಯಲ್ಲಿ ಗೆಲ್ಲಲು ಮುಂದಾಗುತ್ತಾರೆ.
				ನಮ್ಮ ಮಕ್ಕಳತಾವ
				ಗೋಲಿ ಗೆಜ್ಜಿಗ ಗೆದ್ದಿಕೊಂಡ ಮೇಲೆ
				ಅವನಿಗೊಂದು ಘನಮೋಡಿ ಹಾಕಬೇಕು ನಡಿರಯ್ಯ

	ಎಂದು ಏಳುನೂರು ಗಾರುಡಿಗರು ಒಟ್ಟಾಗಿ ಬರುತ್ತಾರೆ. `ಯಾವ ಮೋಡಿ ಹಾಕತೀರಿ ಹಾಕಿರಪ್ಪ ಗಾಡಿಗರ` ಎಂದು ರಾಚಪ್ಪಾಜಿ ಅವರನ್ನು ಸ್ವಾಗತಿಸುತ್ತಾರೆ; ಪಂದ್ಯ ಕಟ್ಟುತ್ತಾರೆ.  ಮೋಡಿಯ ವರ್ಣನೆಯೂ ಅದ್ಭುತ ರೀತಿಯಲ್ಲಿ ವರ್ಣಿತವಾಗಿದೆ.
				ಊರ ಅಂಕದೇಲೆ, ಸೀತಾಳ ಚಪ್ಪರ ಹಾಕತಾರೆ
				ಸೀತಾಳ ಚಪ್ಪರದ ಮುಂದಗಡೆ
				ಒಂದೊಂದು ಆಳುದ್ದ ಬಾವಿ ತೆಗಿಸ್ತಾರೆ ಗಾಡಿಗರು
				ಕಳ್ಳಿಹಾಲ ಎಕ್ಕದ್ದಾಲ ಬಾವಿಗೆ ತುಂಬಿಸುತ್ತಾರೆ
				ನಡು ಚಪ್ಪರದೊಳಗೆ
				ಕ್ವಾಣನೀಗ ಕಡಿಯುತಾರೆ
				ಕ್ವಾಣದ ತಲೆಯ ಮೇಲೆ 
				ರಾಗದೀವಿಗೆ ಎತ್ತುತಾರೆ
				ರಾಗದೀವಿಗೆ ದಂಡ ಒಳಗೆ 
			ಬಂಗಾರ ಮಡಗುತಾರೆ
ಅನಂತರ `ಪಂಪುವಿದ್ಯೆ (ಮಂತ್ರವಿದ್ಯೆ) ನಡೆಸಿ, ರಾಚಪ್ಪಾಜಿಯನ್ನು ಕುರಿತು :
      			ಈಗ ನಾವು ಹಾಕಿದಂತೆ ಮೋಡಿಯನ್ನು
                  ಎತ್ತುಗೊಳ್ಳೊ ಪರದೇಶಿ
-ಎಂದು ಅಹಂಕಾರದಿಂದ ಮಾತನಾಡುತ್ತಾರೆ. ರಾಚಪ್ಪಾಜಿ ಅದನ್ನು ಸುಲಭವಾಗಿ ಗೆದ್ದು ತಾವೊಂದು ಪ್ರತಿಮೋಡಿ ಒಡ್ಡುತ್ತಾರೆ: 
               ಈ ಜೋಳಿಗೆ ಸೈವಾಗಿ 
               ಮುತ್ತಿನ ಕಮಂಡಲ ಎತ್ತಿಗಂಬಿಡಿರಪ್ಪ ಅನ್ನೋದಾಗಿ
               ಮೂರು ಮಂಡಲದ ಬರದುಬಿಟ್ಟು 
               ಬೆತ್ತದಲ್ಲಿ ಮಂಡಲದ ಒಳಗೆ
               ಜೋಳಿಗೆಯನ್ನು ಮಡಗುತಾರೆ
ಆದರೆ, ಅದನ್ನು ಸಾಧಿಸಲು ಗಾಡಿಗರಿಗೆ ಸಾಧ್ಯವಾಗುವುದಿಲ್ಲ.
               ರಕ್ತ ಕಕ್ಕುತ್ತಾರೆ
               ಪ್ರಾಣವನ್ನು ಬಿಡುತ್ತಾರೆ
               ಏಳುನೂರು ಗಾಡಿಗರು ಸತ್ತು ಸತ್ತು ಮನಗುತಾರೆ
	ಇಲ್ಲಿ ರಾಚಪ್ಪಾಜಿ ಮಾಡುವ ಶಕ್ತಿ ಪ್ರದರ್ಶನಕ್ಕೂ ಗಾಡಿಗರು ನಡೆಸುವ ಮೋಡಿ ವಿದ್ಯೆಗೂ ಒಂದು ಅಂತರವಿರುವುದನ್ನು ಕಾಣಬಹುದು. ಗಾಡಿಗರು ನಡೆಸುವ ಮೋಡಿ ದುಷ್ಟ ಸ್ವರೂಪದ್ದು. ರಾಚಪ್ಪಾಜಿ ಮಾಡುವ ಮೋಡಿ `ಸಾತ್ತ್ವಿಕ ಸ್ವರೂಪದ್ದು-ಶಕ್ತಿ ಪ್ರದರ್ಶನ ರೂಪದ್ದು. ಗಾಡಿಗರ ಮೋಡಿಯಲ್ಲಿ ಕೋಣನ ಬಲಿ ಮುಂತಾದವನ್ನು ಕಂಡರೆ ರಾಚಪ್ಪಾಜಿಯ ಮೋಡಿಯಲ್ಲಿ ಅಂಥದಾವುದನ್ನೂ ಕಾಣದೆ, ಗಾಡಿಗರನ್ನು ತಿದ್ದುವ, ಅವರನ್ನು ಸಾತ್ತ್ವಿಕತೆಯ ಕಡೆಗೆ ಎಳೆಯುವ ಪ್ರಯತ್ನವನ್ನು ಕಾಣುತ್ತೇವೆ. ಸೋತು ಸೊರಗಿದ ಗಾಡಿಗರನ್ನು ಕುರಿತು ಮಂಟೇಸ್ವಾಮಿ ಹೇಳುವ ಮಾತುಗಳಲ್ಲಿಯೂ ಈ ಅಂಶವನ್ನು ಗಮನಿಸಬಹುದು.
			ಎಲೋ ಗಾಡಿಗರ
			ನಾವು ಕೊಟ್ಟಿರುವಂತ
			ಬಿರುದಿನಲ್ಲೇ ಜೀವಣ ಮಾಡಬೇಕು ನೀವು
			ನಿಮ್ಮ ಮಾಯದ ಕಪ್ಪು ಮಲೆಯಾಳದ ಬೂದಿ ಕೊಟ್ಟುಬಿಟ್ರೆ
			ರಾಜರ ಸುಟ್ಟು ಹಾಕಿ ಬಿಡ್ತೀರಿ ನೀವು
			ಹಾಗೆನ್ನೋದಾಗಿ ಆ ಕಪ್ಪುದೊಳ್ತಿ ಮಾತ್ರ ಕೊಡನಿಲ್ಲ
			ನಾಲ್ಕುಪಾದ ಜೋಳಿಗ್ಗೆ ಮಡಿಯಕಂಡ್ರು ಪ್ರಭುದೇವ
-ಹೀಗೆ ಅವರನ್ನು ಒಲಿಸಿ, ಒಕ್ಕಲನ್ನಾಗಿಸಿಕೊಳ್ಳುತ್ತಾನೆ. ಇಂಥ ಹಲವು ಸಂದರ್ಭಗಳು ಕಾವ್ಯದ ಉದ್ದಕ್ಕೂ ಬರುತ್ತವೆ. ಆದರೆ ಅವು ಸಾಮಾನ್ಯ ಮೋಡಿಯ ವ್ಯಾಪ್ತಿಯನ್ನು ಪಡೆದುಕೊಳ್ಳದೆ, ಶಕ್ತಿಯ ಸ್ವರೂಪದ ಪವಾಡಗಳಾಗಿ ತೋರುತ್ತವೆ. ಮಾದೇಶ್ವರನ ಕಾವ್ಯದಲ್ಲಿಯೂ ಸಂದರ್ಭದ ಮಹತ್ತ್ವವನ್ನು ತಿಳಿಸುವ ಇಂತಹ ಹಲವು ಘಟನೆಗಳಿವೆ.
	ಮೋಡಿಕಾರರಿಗೆ, ಮೋಡಿಗೆ ಹಿಂದಿನಷ್ಟು ಪ್ರಾಮುಖ್ಯ ಇಂದು ಇಲ್ಲ. ಈ ಕಲೆ ಈಗ ಹೊಟ್ಟೆಪಾಡಿನ ಒಂದು ಸಾಧನವಾಗಿ ಮಾತ್ರ ಉಳಿದಿದೆ. ಒಂದು ಕಾಲಕ್ಕೆ ರಾಜರು ಹಾಗೂ ಸರ್ಕಾರದ ಸಂಬಂಧವನ್ನು ಹೊಂದಿದ್ದ ಈ ಪ್ರದರ್ಶನಕಾರರು, ಇಂದು ಹೇಳಹೆಸರಿಲ್ಲದಂತಾಗುತ್ತಿದ್ದಾರೆ. ಹಿಂದೆ ಮೋಡಿ ಪ್ರದರ್ಶನವನ್ನು ಏರ್ಪಡಿಸುವ ಮೊದಲು ಪೂರ್ವಭಾವಿಯಾಗಿ ಅವರು ಸರ್ಕಾರದ ಅನುಮತಿ ಪಡೆದುಕೊಳ್ಳಬೇಕಾಗುತ್ತಿತ್ತು ಎಂಬುದನ್ನು ಗಮನಿಸಿದರೆ ಮೋಡಿಯ ಮಹತ್ತ್ವ ಹಾಗೂ ವೈಶಿಷ್ಟ್ಯ ವೇದ್ಯವಾಗುತ್ತದೆ. ಮೋಡಿಹಾಕುವುದರ ಬಗೆಗಿನ ಸತ್ಯಾಸತ್ಯತೆಯ ಬಗೆಗೆ ಇಂದು ವೈಜ್ಞಾನಿಕ ಅಧ್ಯಯನ ನಡೆಯುವ ಅಗತ್ಯವಿದೆ.     							    				    
   (ಡಿ.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ